ಜೋಸೆಫ್ -
ಇತಿಹಾಸದಲ್ಲಿ ಈ ಹೆಸರಿನಿಂದ ಪ್ರಸಿದ್ಧರಾದವರು ಮೂವರು. ಇವರಲ್ಲಿ ಇವರು ಇಬ್ಬರು ಪವಿತ್ರ ರೋಮನ್ ಚಕ್ರವರ್ತಿಗಳು, ಇನ್ನೊಬ್ಬ ಪೋರ್ಚುಗಲ್ಲಿನ ದೊರೆ.

	ಜೋಸೆಫ್ 1: 1678-1711. 1705ರಿಂದ 1711ರ ವರೆಗೆ ಪವಿತ್ರ ರೋಮನ್ ಚಕ್ರವತಿ, ಜನನ ವಿಯೆನ್ನದಲ್ಲಿ. 1ನೆಯ ಲೀಯೊಪೋಲ್ಡ್ ಚಕ್ರವರ್ತಿಗೆ ಅವನ ಮೂರನೆಯ ಹೆಂಡತಿ ಎಲನರಳಲ್ಲಿ ಹುಟ್ಟಿದ ಹಿರಿಯ ಮಗ. 1687ರಲ್ಲಿ ಇವನು ಹಂಗರಿಯ ದೊರೆಯಾದ. 1690ರಲ್ಲಿ ರೋಮನ್ ಚಕ್ರಾಧಿಪತ್ಯಕ್ಕೆ ಉತ್ತರಾಧಿಕಾರಿಯಾಗಿ ಆಯ್ಕೆ ಹೊಂದಿದ. 1699ರಲ್ಲಿ ಇವನ ವಿವಾಹವಾಯಿತು. ಹೆಂಡತಿ ವಿಲ್‍ಹೆಲ್ಮೀನ ಅಮಾಲಿಯಾ. ಸ್ಪೇನಿನ ಸಿಂಹಾಸನದ ಮೇಲಿನ ಹಕ್ಕನ್ನು ತನ್ನ ತಮ್ಮ ಚಾಲ್ರ್ಸ್‍ಗೆ (ಮುಂದೆ 5ನೆಯ ಚಾಲ್ರ್ಸ್) ಬಿಟ್ಟುಕೊಟ್ಟ. ತನ್ನ ತಂದೆಯ ಅನಂತರ (1705) ಇವನು ಚಕ್ರವರ್ತಿಯಾದ. ಇವನ ರಾಜ್ಯಭಾರದ ಕಾಲದಲ್ಲಿ ಸ್ಟ್ಯಾನಿಷ್ ಉತ್ತರಾಧಿಕಾರ ಯುದ್ಧ ನಡೆಯುತ್ತಿತ್ತು. ಈ ಯುದ್ಧ ಮುಗಿಯುವ ಮುನ್ನವೇ, 1711ರಲ್ಲಿ ಜೋಸೆಫ್ ತೀರಿಕೊಂಡ.
	ಜೋಸೆಫ್ II: 1741-1790. 1765-1790ರಲ್ಲಿ ಆಳಿದ ಪವಿತ್ರ ರೋಮನ್ ಚಕ್ರವರ್ತಿ. ಫ್ರಾನ್ಸಿನ ಸ್ಟೀಪನ್ (1ನೆಯ ಫ್ರಾನ್ಸಿಸ್ ಚಕ್ರವರ್ತಿ) ಮತ್ತು ಮರೀಯ ಟೆರೀಸಳ ಮಗ. ವಿಯೆಟ್ನದಲ್ಲಿ ಜನಿಸಿದ. 1760ರಲ್ಲಿ ಬೂರ್ಬನ್ ರಾಜಕುಮಾರಿ ಇಸಬೆಲಳನ್ನು ವಿವಾಹವಾದ. ಈಕೆ ತೀರಿಕೊಂಡ ಮೇಲೆ ಬವೇರಿಯದ ಮರೀಯ ಜೋಫಳೊಂದಿಗೆ ಇವನ ವಿವಾಹವಾಯಿತು. 1765ರಲ್ಲಿ ತಂದೆ ಮರಣ ಹೊಂದಿದಾಗ ಇವನು ಪವಿತ್ರ ರೋಮನ್ ಚಕ್ರವರ್ತಿಯಾದ. 1767ರಲ್ಲಿ ಇವನ ದ್ವಿತೀಯ ಪತ್ನಿಯೂ ತೀರಿಕೊಂಡಳು. 1765-1780ರಲ್ಲಿ ಇವನು ತನ್ನ ತಾಯಿಯೊಂದಿಗೆ ಹ್ಯಾಪ್ಸ್‍ಬರ್ಗ್ ಪ್ರದೇಶಗಳ ಸಹ ಅಧಿಪತಿಯಾದ. ಆದರೆ ಇವನಿಗೆ ಅಧಿಕಾರ ಇದ್ದದ್ದು ವಿದೇಶಾಂಗ ಮತ್ತು ಸೈನಿಕ ವ್ಯವಹಾರಗಳಲ್ಲಿ ಮಾತ್ರ. ಪೋಲೆಂಡು ಮೊದಲ ಬಾರಿಗೆ ವಿಭಜನೆಯಾದಾಗ (1772) ಅದರಲ್ಲಿ ಭಾಗವಹಿಸುವಂತೆ ತಾಯಿಯನ್ನು ಬಲವಂತಪಡಿಸಿದ. ಬವೇರಿಯದ ಮೇಲೆ ತನ್ನ ಹಕ್ಕು ಸ್ಥಾಪಿಸಲೂ ಅವಳು ಪ್ರವೇಶಿಸುವಂತೆ ಒತ್ತಾಯಪಡಿಸಿದನಾದರೂ ಆ ಪ್ರಯತ್ನದಲ್ಲಿ ಇವನು ಯಶಸ್ವಿಯಾಗಲಿಲ್ಲ (1778). ಬವೇರಿಯಕ್ಕಾಗಿ ಇವನು ಪ್ರಷ್ಯದೊಂದಿಗೆ ಯುದ್ಧದೊಂದಿಗೆ ಯುದ್ಧಮಾಡಲೂ ಸಿದ್ಧನಿದ್ಧ. 1777ರಲ್ಲಿ ತನ್ನ ತಂಗಿ ಫ್ರಾನ್ಸಿನ ರಾಣಿಮರೀ ಆಂಟ್ವಾನೆಟ್ಟಳನ್ನು ಸಂದರ್ಶಿಸಿ, ಫ್ರೆಂಚ್ ರಾಜತ್ವ ಉರುಳಿಬೀಳುವ ಕಾಲ ಸನ್ನಿಹಿತವಾಗಿದೆಯೆಂದು ಭವಿಷ್ಯ ನುಡಿದ.

	1780ರಲ್ಲಿ ಜೋಸೆಫನ ತಾಯಿ ತೀರಿಕೊಂಡಳು. ಹ್ಯಾಪ್ಸ್‍ಬರ್ಗ್ ಆಡಳಿತದಲ್ಲಿ ಇವನಿಗೆ ಸ್ವಾತಂತ್ರ್ಯ ಲಭಿಸಿತು. ಇವನು ಚರ್ಚನ್ನು ತೀವ್ರವಾಗಿ ಟೀಕಿಸಿದ. ಸುಮಾರು 700 ಧಾರ್ಮಿಕ ಗೃಹಗಳನ್ನು ಹತ್ತಿಕ್ಕಿ, ಪಾದ್ರಿಗಳ ಸಂಖ್ಯೆಯನ್ನು ಬಹಳವಾಗಿ ಇಳಿಸಿದ; ಅವರು ಅಧಿಕಾರಕ್ಕೆ ಮಣಿಯುವಂತೆ ಮಾಡಿದ. ತನ್ನ ಆಡಳಿತ ಪ್ರದೇಶಗಳಲ್ಲೆಲ್ಲ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯ ನೀಡಿ ಆ ಬಗ್ಗೆ ಆದೇಶವನ್ನು 1781ರಲ್ಲಿ ಪ್ರಕಟಿಸಿದ. ಜೋಸೆಫನ ತೀವ್ರ ಕ್ರಮಗಳನ್ನು ತಪ್ಪಿಸಲು 3ನೆಯ ಪೋಪ್ ಪಯಸ್ 1782ರಲ್ಲಿ ವಿಯೆನ್ನಕ್ಕೆ ಭೇಟಿ ನೀಡಿ ಜೋಸೆಫನನ್ನು ಸಂದರ್ಶಿಸಿದ. ಜೋಸೆಫ್ ಒಲಿಯಲಿಲ್ಲ. 1855ರಲ್ಲಿ ಸಾಮರಸ್ಯ ಏರ್ಪಡುವವರೆಗೂ ಜೋಸೆಫನ ತೀವ್ರ ನೀತಿ ಮುಂದುವರಿಯಿತು.

	ನಿರುಂಕುಶ ಪ್ರಭುವಾದರೂ ಜೋಸೆಫ್ ಅನೇಕ ಸುಧಾರಣೆಗಳನ್ನು ತಂದ. ರೈತರ ವಿಮೋಚನೆ, ಶಿಕ್ಷಣ ವಿಸ್ತರಣೆ, e್ಞÁನ ವಿe್ಞÁನ ಸಂಸ್ಥೆಗಳ ನಿರ್ಮಾಣ, ಆಸ್ಪತ್ರೆಗಳು, ರಕ್ಷಣಾಗೃಹಗಳ ಮತ್ತು ಅನಾಥಾಲಯಗಳ ಸ್ಥಾಪನೆ, ಸಾಮ್ಯ ಸೂತ್ರವನ್ನನುಸರಿಸಿ ತೆರಿಗೆಗಳ ಪರಿಷ್ಕರಣ, ದಕ್ಷಿಣ ಹಂಗರಿಯ ಬೀಳು ಜಮೀನುಗಳಲ್ಲಿ ಜರ್ಮನರ ನೆಲೆಗೊಳಿಕೆ, ನ್ಯಾಯ ಸುಧಾರಣೆ-ಇವು ಜೋಸೆಫನ ಕೆಲವು ಕ್ರಮಗಳು. ಇವುಗಳಿಂದಾಗಿ ಇವನನ್ನು ಜನತೆಯ ಚಕ್ರವರ್ತಿ ಎಂದು ಕರೆಯಲಾಗಿದೆ. ಇವನೊಬ್ಬ ಕಿರೀಟಧಾರಿ ಸಮಾಜವಾದಿ. ಆದರೆ ಇವನ ಆಧಿಪತ್ಯಗಳಲ್ಲಿ ಇವನ ಸುಧಾರಣಾಕ್ರಮಗಳಿಗೆ ವಿಶೇಷ ವಿರೋಧ ಕಂಡುಬಂದಿತು. ತಮ್ಮ ಜೀವನಕ್ಕೆ ಭಾರಿ ಪೆಟ್ಟು ಬೀಳುತ್ತಿದೆಯೆಂದು ಹಂಗರಿ, ಬೊಹೀಮಿಯ ಮತ್ತು ಗ್ಯಾಲೀಷಿಯದ ನೆಲದೊಡೆಯರು ಭಾವಿಸಿದರು. ಕ್ಯಾತೊಲಿಕ್ ಜನರು ಇವನ ಪಾದ್ರಿ ವಿರೋಧಿ ಕ್ರಮಗಳನ್ನು ಪ್ರತಿಭಟಿಸಿದರು. ಕೇಂದ್ರೀಕೃತ ಆಡಳಿತ ಸ್ಥಾಪಿಸಲು ಇವನು ಕೈಗೊಂಡ ಕ್ರಮಗಳನ್ನು ಇವನ ಜರ್ಮನೇತರ ಪ್ರಜೆಗಳು ಪ್ರಬಲವಾಗಿ ವಿರೋಧಿಸಿದರು. 1788ರ ವೇಳೆಗೆ ಇವನ ರಾಜ್ಯದ ಹೊರವಲಯದಲ್ಲಿದ್ದ ಪ್ರದೇಶಗಳಲ್ಲಿ ಬಂಡಾಯ ಹಬ್ಬಿತು.

	ಬವೇರಿಯ, ವೆನಿಸ್, ತುರ್ಕಿಗಳ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಇವನು ಯತ್ನಿಸಿದ. ಫ್ರಾನ್ಸ್ ಮತ್ತು ಪ್ರಷ್ಯ ಇವನ ಪ್ರಯತ್ನವನ್ನು ವಿರೋಧಿಸಿದುವು. ಇವನು ಅವುಗಳ ವಿರುದ್ಧವಾಗಿ ರಷ್ಯದೊಡನೆ ಸ್ನೇಹ ಬೆಳೆಸಿದ. ತುರ್ಕಿಯ ಮೇಲೆ ದಂಡೆತ್ತಿ ಹೋದ. ಆದರೆ ದಂಡಯಾತ್ರೆಯ ಸಮಯದಲ್ಲಿ ಇವನ ಆರೋಗ್ಯ ಕೆಟ್ಟಿತು. (1789). ಜೋಸೆಫನ ಕನಸುಗಳೆಲ್ಲ ಮುರಿದುಬಿದ್ದವು. ಇವನು ಜನಸಂಗವನ್ನು ತೊರೆದ. ಜಾರಿಗೆ ತಂದಿದ್ದ ಸುಧಾರಣೆಗಳನ್ನು ರದ್ದುಮಾಡಿದ. 1790ರಲ್ಲಿ ತೀರಿಕೊಂಡ. ಇವನು ಹುಟ್ಟಿಸಿದ ಪಕ್ಷುಬ್ಧತೆಯನ್ನು ಅಡಗಿಸುವ ಕೆಲಸ ಅನಂತರ ಬಂದ ಇವನ ತಮ್ಮ 2ನೆಯ ಲೀಯೊಪೋಲ್ಡನದಾಯಿತು.

	ಜೋಸೆಫ್ : 1714-1777. ಪೋರ್ಚುಗಲ್ಲಿನ ದೊರೆ (1750-1777). ತಂದೆ 5ನೆಯ ಜಾನ್. ತಾಯಿ ಆಸ್ಟ್ರಿಯದ ಮರೀಯಾನ್. ಸ್ಪೇನಿನ 5ನೆಯ ಫಿಲಿಪನ ಮಗಳಾದ ಮರಿಯಾ ವಿಕ್ಟೋರಿಯ ಇವನ ಪತ್ನಿ. ಇವನ ಆಳ್ವಿಕೆಯ ಕಾಲದಲ್ಲಿ ಮಾಕ್ರ್ವಿಸ್ ದೆ ಪೋನ್‍ಮ್‍ಬಾಲ್ ಎಂಬಾತ ಪ್ರಬಲನಾದ. ಜೋಸೆಫ್ ಅವನ ಪ್ರಭಾವಕ್ಕೆ ಒಳಗಾಗಿದ್ದ. ಫೋನ್‍ಮ್‍ಬಾಲ್‍ನ ವ್ಯಕ್ತಿತ್ವದ ಮುಂದೆ ಇವನದು ತುಂಬ ಸಪ್ಪೆಯಾಗಿ ಪರಿಣಮಿಸಿತು. 1758ರಲ್ಲಿ ಇವನ್ನು ಹತ್ಯೆ ಮಾಡುವ ಪ್ರಯತ್ನವೊಂದು ನಡೆಯಿತು. ಇವನು 1777ರಲ್ಲಿ ತೀರಿಕೊಂಡ. ಇವನ ಅನಂತರ ಇವನ ಮಗಳಾದ 1ನೆಯ ಮರಿಯೂ ಅಧಿಕಾರಕ್ಕೆ ಬಂದಳು.
(ಎನ್.ಎ.ಎಚ್.ಎಂ.)	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ